ಬಾಲ್ಟಿಕ್ ಭಾಷೆಗಳು 
ಇಂಡೊಯೂರೊಪಿಯನ್ ಭಾಷಾಪರಿವಾರಕ್ಕೆ ಸೇರಿದ ಒಂದು ಭಾಷಾವರ್ಗ, ಬಾಲ್ಟಿಕ್ ಸಮುದ್ರದ ತೀರಪ್ರದೇಶದ ಆಗ್ನೇಯ ಭಾಗದಲ್ಲಿ ಈ ವರ್ಗಕ್ಕೆ ಸೇರಿದ ಅನೇಕ ಭಾಷೆಗಳನ್ನು ಮಾತಾಡುವವರಿದ್ದಾರೆ. ಅವರ ಸಂಖ್ಯೆ ಖಚಿತವಾಗಿ ತಿಳಿದುಬಂದಿಲ್ಲ. ಬಾಲ್ಟಿಕ್ ಭಾಷೆಗಳನ್ನು ಪಶ್ಚಿಮ ಬಾಲ್ಟಿಕ್ (ಪ್ರಾಚೀನ ಪ್ರಶ್ಯನ್) ಮತ್ತು ಪೂರ್ವ ಬಾಲ್ಟಿಕ್ (ಲಿಥುಆನಿಯನ್, ಲಿಟ್ಟಿಯನ್) ಎಂಬುದಾಗಿ ವರ್ಗೀಕರಿಸಲಾಗಿದೆ. ಧ್ವನಿವ್ಯವಸ್ಥೆ, ಪದ ಮತ್ತು ವ್ಯಾಕರಣ ವಿಚಾರಗಳಲ್ಲಿ ಈ ಭಾಷೆಗಳು ಸ್ಲಾವಿಕ್ ಭಾಷೆಗಳನ್ನು ಹೆಚ್ಚು ಹೋಲುತ್ತವೆಯಾದ್ದರಿಂದ ಇವೆರಡನ್ನೂ ಬಾಲ್ಟೊ-ಸ್ಲಾವಿಕ್ ಭಾಷಾವರ್ಗವೆಂದು ಕರೆಯಲಾಗಿದೆ. ಮೂಲ ಇಂಡೊಯೂರೊಪಿಯನ್ ಭಾಷೆಯಿಂದ ಬೇರ್ಪಟ್ಟ ಯಾವುದೋ ಒಂದು ಭಾಷೆ ಬಾಲ್ಟೊ-ಸ್ಲಾವಿಕ್ ಭಾಷಾವರ್ಗಕ್ಕೆ ಸೇರಿದ ಭಾಷೆಗಳಿಗೆ ಮೂಲಭಾಷೆಯಾಗಿರಬಹುದೆಂದೂ ಪರಸ್ಪರ ಗ್ರಹಿಕೆ, ಭಾಷಾಸ್ವೀಕರಣ ಮುಂತಾದ ಕಾರಣಗಳಿಂದಾಗಿ ಈ ಭಾಷಾವರ್ಗಗಳಲ್ಲಿ ಸಮಾನ ವ್ಯಾಕರಣಾಂಶಗಳನ್ನು ಕಾಣಬಹುದಾಗಿದೆಯೆಂದು ಭಾಷಾವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಬಾಲ್ಟಿಕ್ ಭಾಷೆಗಳಲ್ಲಿ ಮೂಲ ಇಂಡೊಯುರೊಪಿಯನ್ ಕ ಕಾರ ಸ ಕಾರವಾಗಿ ಪರಿವರ್ತನೆಗೊಂಡಿದೆ (ಕ>ಸ). ಈ ಕಾರಣದಿಂದಲೇ ಬಾಲ್ಟಿಕ್ ಭಾಷೆಗಳನ್ನು ಸತುಮ್ (ಸಕಾರತಮ) ಭಾಷಾವರ್ಗಕ್ಕೂ ಸೇರಿಸಲಾಗಿದೆ. ಈ ಭಾಷಾವರ್ಗ ದ್ವಿವಚನ ವ್ಯವಸ್ಥೆಯನ್ನು ಉಳಿಸಿಕೊಂಡು ಬಂದಿದೆ. ಅಲ್ಲದೆ ಶಬ್ದಗಳ ಉಚ್ಚಾರಣೆಯಲ್ಲಿ ಸ್ವರಾಘಾತ ಬಲಾಘಾತಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.									(ಕೆ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ